ಗುರುವಾರ, ಆಗಸ್ಟ್ 15, 2013

ಓ ನನ್ನ ಚೆಲುವೆ..

ಪ್ರಿಯೆ,
ನನ್ನೆದೆಯೊಳಗಿನ ನೂರೆಂಟು ಭಾವಗಳಿಗೆ
ಪ್ರಿಯ ಮಾತಿನ ಸ್ಪರ್ಶ ನೀಡುವ ಬಯಕೆ..
ಆದರೂ ಕೊರಳೊಳು ದಿವ್ಯ ಮೌನದ ಹಂದರ.!!
ಈ ಮೌನದಲೆ ಮಾತನಾಡುವ ಹಂಬಲ
ಎದೆಯೊಳಗೆ ಕವನ ಸೃಜಿಸುವ ಚಪಲ
ನಿನ್ನ ಕಂಗಳೊಳಗೆ ಕರಗಿ ಹೋಗುವ ಆಸೆ..
ಆದರೂ ತಡೆದುಕೊಳ್ಳುತ್ತಿದ್ದೇನೆ..!!
ಮನದ ಭಾವಗಳಿಗೆ ಕಡಿವಾಣ ಹಾಕಿ..!!
ಎದೆಯ ಆಸೆಗಳಿಗೆ ಮುಸುಕು ಮುಚ್ಚಿ..!!
ನನಗೇ ತಿಳಿಯದಂತೆ,
ನನ್ನ ಕವನಗಳಲ್ಲಿ ನಿನ್ನ ಸ್ಪೂರ್ತಿಯಿದೆ
ನನ್ನೆದೆಯ ಪ್ರೀತಿಯ ಆ ಸ್ಪರ್ಶವಿದೆ..!!
ಗಾಳಿಯಲಿ ತೇಲಾಡೊ ನಿನ್ನ ಮುಂಗುರುಳ
ವರ್ಣನೆಯ ಪದಗಳ ಸಾಲುಗಳಿವೆ..!!
ಆದರೂ ದೂರವಿದ್ದೇನೆ..!!
ಎದೆಯೊಳಗೆ ನಿನ್ನನ್ನಿರಿಸಿಯೂ ಮೌನವಾಗಿದ್ದೇನೆ..!!
ನೋಡುಗರ ಹೇಳಿಕೆಯ ಅಂಜಿಕೆಯಲ್ಲ
ಯಾರದೋ ಭಯವೂ ಕಾರಣವಲ್ಲ..!!
ನಿನ್ನ ತಿರಸ್ಕೃತಿಯ ಭಯದ ಕಲ್ಪನೆಯಿಂದ..!!
ಎಲೆ ಚೆಲುವೆ,ಪ್ರೇಮಕಾರಂಜಿ
ನಾ ಆ ರಾತ್ರಿಯ ನಿದ್ರೆಗಾಗಿ ಕಾಯುತ್ತೇನೆ
ಗಾಡ ನಿದ್ರೆಯೊಳಗೆ ಜಾರಿಹೋಗಲು ಬಯಸುತ್ತೇನೆ..
ನಿದಿರೆಯ ಒಳಗೆ ಬರುವ ನಿನಗಾಗಿ,
ನಿನ್ನೊಡನೆ ಹರಟಿ ಹೆಜ್ಜೆ ಹಾಕಲಿಕ್ಕಾಗಿ..!!
ಹೊಳೆವ ಪ್ರೀತಿಯ ಜಗದಲಿ ನಗುವುದಕ್ಕಾಗಿ..!!
ಹೆಚ್ಚಿನ ಆಸೆಯ ಹಂದರವಿಲ್ಲ ಚೆಲುವೆ,
ಎದೆಯೊಳಗಿನ ನಿನ್ನೊಡನೆ ಜಗವ ಮರೆಯಬಲ್ಲೆ..
ಬದುಕಿನಂಗಳದಲ್ಲಿ ಸುಖದಿ ಬಾಳಬಲ್ಲೆ..
ನಿನ್ನ ನೆನಪಲೆ ಬದುಕ ಕಟ್ಟಬಲ್ಲೆ..!!!

ಅಜ್ಞಾತಮಾನವ

ಗುರುವಾರ, ಆಗಸ್ಟ್ 1, 2013

ಗತ ವೈಭವ

ಗತ ವೈಭವ

ಪಾಳೂರ ಮಧ್ಯದಲ್ಲೊಂದು ಒಂಟಿಕಂಬ
ನಿಂತಿಹುದು ಬಿಸಿಲು ಮಳೆ ಗಾಳಿಗಳಲ್ಲಿ
ಎದೆಯೊಡ್ಡಿ ಅಂಜದೆ ಅಳುಕದೆ
ಸುತ್ತ ಸುಟ್ಟು ಕರಟಿದ ಊರ
ಹಳೆಯ ವೈಭವದ ಕಥೆ ಹೇಳಲೆಂಬಂತೆ
ಎದೆಯೊಳಗಿನ ದುಗುಡ ಹೊರಗೆಡವಲೆಂಬಂತೆ...

ಸುತ್ತ ಹಸಿರಿತ್ತು,ಹರಿವ ನದಿಯಿತ್ತು
ನಕ್ಕು ನಲಿಯುವ ಮುಗ್ದ ಮಕ್ಕಳ ಗುಂಪಿತ್ತು
ಲಲ್ಲೆ ಹೊಡೆಯುವ ಪ್ರೇಮಿಗಳಲಿ ಮುಗಿಯದ ಪಿಸುಮಾತಿತ್ತು..
ದಂಡಿಸುವ ಅಪ್ಪಂದಿರ ಜೋರಿನೊಳು ಪ್ರೀತಿಯಿತ್ತು
ಅಮ್ಮಂದಿರ ಮಮತೆಯ ಬೇಲಿಯೊಳು ಸುಖವಿತ್ತು
ರಾತ್ರಿಯೊಳು ಭಯಪಡಿಸೊ ಭೂತಗಳ ಕಥೆಯಿತ್ತು...!!!

ಮುತ್ತು ರತ್ನದ ರಾಶಿ,ವಿಜಯನಗರದ ರೀತಿ
ಮಾರ್ಗದೊಳು ಬಿದ್ದಿರಲಿಲ್ಲ,ಆದರೂ ಪ್ರೀತಿಗೆ ಬರವಿರಲಿಲ್ಲ!!
ಸಾಮ್ರಾಜ್ಯಶಾಹಿತ್ವದ ಬಿಸಿರಕ್ತದ ಹಸಿವಿರಲಿಲ್ಲ
ನಿನ್ನೆ ಮೊನ್ನೆಯವರೆಗೂ,ಆಧುನಿಕತೆಯ ಗಾಳಿ ಸೋಕುವವರೆಗೂ..!!
ಎದೆಯೊಳಗಿನ ಪ್ರೀತಿಯ ಸ್ಪರ್ಶಕೆ ಬರವಿರಲಿಲ್ಲ
ಕಾಂಚಾಣದ ಕಡುದೃಷ್ಟಿ ಬೀಳುವವರೆಗೂ...!!

ಏನಿದೆ ಈಗಲ್ಲಿ.,ಬರಿಯ ಅರೆ ಸುಟ್ಟ ಮನೆ
ಅರೆಬೆಂದ ಹೆಣಗಳ ತಿಂಬ ಹದ್ದುಗಳೆ ತಾನೆ..?!!
ಒಂಟಿ ಕಂಬದ ಇಲ್ಲದ ಕಣ್ಣಲ್ಲು ನೀರು
ಮಾತನಾಡಲಾಗದ ಎದೆಯೊಳಗೆ,ಕೂಡಿಟ್ಟ ದುಃಖದ ಭಾರ..!!
ಸೂರ್ಯ ಹುಟ್ಟುವ ಮೊದಲೆ ಕರಗಿತ್ತು ಊರು.
ಕರಟಿ ಬೂದಿಯಾಗಿದ್ದು ಮನಸ ಪ್ರೀತಿಯ ಸೂರು..!!!

ಅಜ್ಞಾತ ಮಾನವ