ಬುಧವಾರ, ನವೆಂಬರ್ 6, 2013

ಕಟು ಸತ್ಯ..

ಕಟು ಸತ್ಯ

ನನ್ನೊಳಗಿನ ಕನಸು
ನನಸಾಗೋ ಹೊತ್ತಿನಲಿ
ಮನಸು ಕನಸ ಮರೆತಿತ್ತು.
ಪ್ರೀತಿಯ ಮೀನು
ಕೈಯೊಳಗೆ ಬರುವ ಹಾಗೇ
ನುಣುಚಿ ದೂರಕೆ ಸಾಗಿ ಹೋಗಿತ್ತು..!!

ನೂರಾರು ಭಾವಗಳ ಮೇಳ
ಹಾಡುಗಳ ಹೆಣೆಯೊ ವೇಳೆಯಲಿ
ಮನದ ಒಳಗಿನಿಂದದು ಅಂತರ್ಧಾನವಾಗಿತ್ತು..
ಸುತ್ತ ತುಂಬಿದ ಬಂಗಾರ ಬೆಳಕು
ಆಸ್ವಾದಿಸಲು ಕಣ್ತೆರೆಯೋ ಹೊತ್ತಿನಲಿ
ಸಾಗರದಂಚಲಿ ಸೂರ್ಯ ಮುಳುಗಿತ್ತು.!!

ಕೈಯೊಳಗೆ ಬದುಕು
ನನ್ನೊಳಗೆ ಇಡೀ ಜಗತ್ತು,ಅನ್ನುವಾಗ
ಉಳಿದಿದ್ದು ಸುತ್ತ ಬರೇ ಶೂನ್ಯತೆ..
ಎಲ್ಲರೂ ಇದ್ದಾರೆ ಸುತ್ತಮುತ್ತ
ನನ್ನೊಡನೆ ನಕ್ಕು ನಲಿಯಲಿಕ್ಕೆ ಅಂದಾಗ
ಕಂಡಿದ್ದು ಬರಿಯ ಏಕಾಂತತೆ..!!

ಕನಸಿನೊಳು ಮುಳುಗಿದ ಮನಸು
ನಿಜವ ಅರಿಯುವ ವೇಳೆಗಲ್ಲಿ
ಸುಳ್ಳೆ ನಿಜದ ಮುಖವ ಧರಿಸಿತ್ತು..
ಮಿಣುಕು ಹುಳವೆ ತಾರೆ
ಆಗಸದಿರುವುದೆಲ್ಲ ಮಿಣುಕು ಹುಳ
ಅನ್ನುವುದೆ ನಿಜವೆಂದು ಕಲಿಸಲಾಗಿತ್ತು..!!

ಅಜ್ಞಾತಮಾನವ

ಭಾನುವಾರ, ಅಕ್ಟೋಬರ್ 13, 2013

ದ್ವೇಷ..

ದ್ವೇಷ

ಧಗ ಧಗನೆ ಉರಿವ ದ್ವೆಷದ ಜ್ವಾಲೆ
ಸುಡುತಿಹುದು ಮನಸಿನ ಭಾವಶಾಲೆ
ಸುಖವೆಲ್ಲಿಯದು ಬರಡು ಜಗದೊಳಗೆ
ಅರಿಯದ ಸಂಶಯದ ಕಣ್ಣು ಎದೆಯ ಗೂಡು

ಮುಸ್ಸಂಜೆ ಮುಸುಕುವ ಬಹು ಮುನ್ನ
ಪಡುವಣದಿ ಮುಳುಗಿಹೋದನು ಸೂರ್ಯ..?!!
ಕತ್ತಲಡರಿದರು ತಾರೆಗಳ ಸುಳಿವಿಲ್ಲ
ತಂಪು ತಿಂಗಳನೆಲ್ಲೊ ಕಳೆದು ಹೋದನಲ್ಲಿ...?!!!

ಹತ್ತಾರು ಆಸೆಗಳು,ಆಕಾಂಕ್ಷೆ ಮೂಟೆಗಳು
ಬಂದಿಯಾಗಿಹುದು ಮನಸಿನ ಮೂಲೆಯಲ್ಲಿ..!!!
ಚಿಂತನೆಯ ಬಾಯಿಗೆ ಜಡಿದಿರಲು ಬೀಗ
ಮನಸು ವಿಕ್ಷುಬ್ದ,ಅಲ್ಲಿ ನಡೆದಿತ್ತೆ ಕುರುಕ್ಷೇತ್ರ ಯುದ್ಧ...!!!

ಕಣ್ಣೀರ ಮರೆತು ಮನಸದು ಒಣಗಿಹುದು
ಮರಳ ರಾಶಿಯಲಿ ಬತ್ತಿಹೋಗಿಹುದು ಕನಸು..?!!
ಹೃದಯ ಕಲ್ಲಾಗಿಹುದೆ..,ಇಲ್ಲ ಮರಳಾಗಿಹುದೆ
ವಿಪ್ಲವತೆಯಲಿ ಹೊರಳಿ ವಿವೇಕ ಕೊರಗಿಹುದು..!!!

ಮಗುವಿನ ಮುಗ್ದ ಮನಸೂ ಕಲುಷಿತ
ಗಾಳಿಯೆ ಹಾಳಾಗಿಹುದೆ? ಇಲ್ಲ ಉಸಿರೇ..?
ರಕ್ತದ ಕಣಕಣದಲು ಉರಿಯುವ ಬೆಂಕಿ
ಸತ್ತು ಬಿದ್ದಿದ್ದು ಮಾನವಾತ್ಮದ ಸಿರಿಮಡಿಲು...!!!

ಅಜ್ಞಾತ ಮಾನವ

ಗುರುವಾರ, ಆಗಸ್ಟ್ 15, 2013

ಓ ನನ್ನ ಚೆಲುವೆ..

ಪ್ರಿಯೆ,
ನನ್ನೆದೆಯೊಳಗಿನ ನೂರೆಂಟು ಭಾವಗಳಿಗೆ
ಪ್ರಿಯ ಮಾತಿನ ಸ್ಪರ್ಶ ನೀಡುವ ಬಯಕೆ..
ಆದರೂ ಕೊರಳೊಳು ದಿವ್ಯ ಮೌನದ ಹಂದರ.!!
ಈ ಮೌನದಲೆ ಮಾತನಾಡುವ ಹಂಬಲ
ಎದೆಯೊಳಗೆ ಕವನ ಸೃಜಿಸುವ ಚಪಲ
ನಿನ್ನ ಕಂಗಳೊಳಗೆ ಕರಗಿ ಹೋಗುವ ಆಸೆ..
ಆದರೂ ತಡೆದುಕೊಳ್ಳುತ್ತಿದ್ದೇನೆ..!!
ಮನದ ಭಾವಗಳಿಗೆ ಕಡಿವಾಣ ಹಾಕಿ..!!
ಎದೆಯ ಆಸೆಗಳಿಗೆ ಮುಸುಕು ಮುಚ್ಚಿ..!!
ನನಗೇ ತಿಳಿಯದಂತೆ,
ನನ್ನ ಕವನಗಳಲ್ಲಿ ನಿನ್ನ ಸ್ಪೂರ್ತಿಯಿದೆ
ನನ್ನೆದೆಯ ಪ್ರೀತಿಯ ಆ ಸ್ಪರ್ಶವಿದೆ..!!
ಗಾಳಿಯಲಿ ತೇಲಾಡೊ ನಿನ್ನ ಮುಂಗುರುಳ
ವರ್ಣನೆಯ ಪದಗಳ ಸಾಲುಗಳಿವೆ..!!
ಆದರೂ ದೂರವಿದ್ದೇನೆ..!!
ಎದೆಯೊಳಗೆ ನಿನ್ನನ್ನಿರಿಸಿಯೂ ಮೌನವಾಗಿದ್ದೇನೆ..!!
ನೋಡುಗರ ಹೇಳಿಕೆಯ ಅಂಜಿಕೆಯಲ್ಲ
ಯಾರದೋ ಭಯವೂ ಕಾರಣವಲ್ಲ..!!
ನಿನ್ನ ತಿರಸ್ಕೃತಿಯ ಭಯದ ಕಲ್ಪನೆಯಿಂದ..!!
ಎಲೆ ಚೆಲುವೆ,ಪ್ರೇಮಕಾರಂಜಿ
ನಾ ಆ ರಾತ್ರಿಯ ನಿದ್ರೆಗಾಗಿ ಕಾಯುತ್ತೇನೆ
ಗಾಡ ನಿದ್ರೆಯೊಳಗೆ ಜಾರಿಹೋಗಲು ಬಯಸುತ್ತೇನೆ..
ನಿದಿರೆಯ ಒಳಗೆ ಬರುವ ನಿನಗಾಗಿ,
ನಿನ್ನೊಡನೆ ಹರಟಿ ಹೆಜ್ಜೆ ಹಾಕಲಿಕ್ಕಾಗಿ..!!
ಹೊಳೆವ ಪ್ರೀತಿಯ ಜಗದಲಿ ನಗುವುದಕ್ಕಾಗಿ..!!
ಹೆಚ್ಚಿನ ಆಸೆಯ ಹಂದರವಿಲ್ಲ ಚೆಲುವೆ,
ಎದೆಯೊಳಗಿನ ನಿನ್ನೊಡನೆ ಜಗವ ಮರೆಯಬಲ್ಲೆ..
ಬದುಕಿನಂಗಳದಲ್ಲಿ ಸುಖದಿ ಬಾಳಬಲ್ಲೆ..
ನಿನ್ನ ನೆನಪಲೆ ಬದುಕ ಕಟ್ಟಬಲ್ಲೆ..!!!

ಅಜ್ಞಾತಮಾನವ

ಗುರುವಾರ, ಆಗಸ್ಟ್ 1, 2013

ಗತ ವೈಭವ

ಗತ ವೈಭವ

ಪಾಳೂರ ಮಧ್ಯದಲ್ಲೊಂದು ಒಂಟಿಕಂಬ
ನಿಂತಿಹುದು ಬಿಸಿಲು ಮಳೆ ಗಾಳಿಗಳಲ್ಲಿ
ಎದೆಯೊಡ್ಡಿ ಅಂಜದೆ ಅಳುಕದೆ
ಸುತ್ತ ಸುಟ್ಟು ಕರಟಿದ ಊರ
ಹಳೆಯ ವೈಭವದ ಕಥೆ ಹೇಳಲೆಂಬಂತೆ
ಎದೆಯೊಳಗಿನ ದುಗುಡ ಹೊರಗೆಡವಲೆಂಬಂತೆ...

ಸುತ್ತ ಹಸಿರಿತ್ತು,ಹರಿವ ನದಿಯಿತ್ತು
ನಕ್ಕು ನಲಿಯುವ ಮುಗ್ದ ಮಕ್ಕಳ ಗುಂಪಿತ್ತು
ಲಲ್ಲೆ ಹೊಡೆಯುವ ಪ್ರೇಮಿಗಳಲಿ ಮುಗಿಯದ ಪಿಸುಮಾತಿತ್ತು..
ದಂಡಿಸುವ ಅಪ್ಪಂದಿರ ಜೋರಿನೊಳು ಪ್ರೀತಿಯಿತ್ತು
ಅಮ್ಮಂದಿರ ಮಮತೆಯ ಬೇಲಿಯೊಳು ಸುಖವಿತ್ತು
ರಾತ್ರಿಯೊಳು ಭಯಪಡಿಸೊ ಭೂತಗಳ ಕಥೆಯಿತ್ತು...!!!

ಮುತ್ತು ರತ್ನದ ರಾಶಿ,ವಿಜಯನಗರದ ರೀತಿ
ಮಾರ್ಗದೊಳು ಬಿದ್ದಿರಲಿಲ್ಲ,ಆದರೂ ಪ್ರೀತಿಗೆ ಬರವಿರಲಿಲ್ಲ!!
ಸಾಮ್ರಾಜ್ಯಶಾಹಿತ್ವದ ಬಿಸಿರಕ್ತದ ಹಸಿವಿರಲಿಲ್ಲ
ನಿನ್ನೆ ಮೊನ್ನೆಯವರೆಗೂ,ಆಧುನಿಕತೆಯ ಗಾಳಿ ಸೋಕುವವರೆಗೂ..!!
ಎದೆಯೊಳಗಿನ ಪ್ರೀತಿಯ ಸ್ಪರ್ಶಕೆ ಬರವಿರಲಿಲ್ಲ
ಕಾಂಚಾಣದ ಕಡುದೃಷ್ಟಿ ಬೀಳುವವರೆಗೂ...!!

ಏನಿದೆ ಈಗಲ್ಲಿ.,ಬರಿಯ ಅರೆ ಸುಟ್ಟ ಮನೆ
ಅರೆಬೆಂದ ಹೆಣಗಳ ತಿಂಬ ಹದ್ದುಗಳೆ ತಾನೆ..?!!
ಒಂಟಿ ಕಂಬದ ಇಲ್ಲದ ಕಣ್ಣಲ್ಲು ನೀರು
ಮಾತನಾಡಲಾಗದ ಎದೆಯೊಳಗೆ,ಕೂಡಿಟ್ಟ ದುಃಖದ ಭಾರ..!!
ಸೂರ್ಯ ಹುಟ್ಟುವ ಮೊದಲೆ ಕರಗಿತ್ತು ಊರು.
ಕರಟಿ ಬೂದಿಯಾಗಿದ್ದು ಮನಸ ಪ್ರೀತಿಯ ಸೂರು..!!!

ಅಜ್ಞಾತ ಮಾನವ

ಶನಿವಾರ, ಜುಲೈ 27, 2013

ಕನಸು ಗೀಚಿದ ಹುಡುಗಿ..

ಮನಸ ರಾಜ್ಯದಲಿ ಕನಸು ಮಾರುವ ಹುಡುಗಿ
ಬಿಳಿಹಾಳೆಯ ಹೃದಯದಲಿ ಕವನ ಗೀಚಿದಳು..

ಹೊಳೆವ ಕಣ್ಣದು, ನಕ್ಷತ್ರ ಬಿಂಬ
ಚಂಚಲ ರೆಪ್ಪೆ, ಹೊಡೆವಾಗ ಪಟಪಟನೆ
ಎನ್ನ ಹೃದಯವದು ಹೊಸರಾಗ ಹಾಡಿತ್ತು
ಎದೆಯೊಳಗೆ ಸವಿ, ಕನಸು ಮೂಡಿತ್ತು

ಕೆನ್ನೆಯಂಚಲಿ ನವಿರು ಕೆಂಪಿನ ಅಚ್ಚು,
ಅಧರದಂಚಲಿ ನಸು ಮಂದಹಾಸದ ನಲಿವು
ಮನಸಿನಾಳದಲಿ ಸುಳಿದು ಇಳಿದಿತ್ತು
ಕಣ್ಣಿನಲಿ ಅವಳ ಪ್ರತಿಬಿಂಬ ಮೂಡಿತ್ತು

ತಂಗಾಳಿಯಲಿ ಅವಳ ಮುಂಗುರುಳ ಲಾಸ್ಯ
ನನ್ನೊಳಗೆ ಪ್ರೀತಿಯ ಕನಸ ವಿನ್ಯಾಸ
ಬದುಕಿನಂಗಳದಿ ಹೊಸತು ದೀಪ ಬೆಳಗಿತ್ತು
ಅರಿವಿನಂಚಿನ ಗಡಿಯ ಮನಸು ದಾಟಿತ್ತು...


ಅವಳು,
ಮನಸ ರಾಜ್ಯದಲಿ ಕನಸು ಮಾರಿದ ಹುಡುಗಿ
ಬಿಳಿಹಾಳೆಯ ಹೃದಯದಲಿ ಕವನ ಗೀಚಿದಳು.. 

ಮಂಗಳವಾರ, ಜುಲೈ 23, 2013

ಪಯಣ..

ಕತ್ತಲಿನ ರಾತ್ರಿ ಗಾಢಾಂಧಕಾರ
ಬೆಳಕಿಲ್ಲ,ತಿಂಗಳನ ಸುಳಿವೇ ಇಲ್ಲ..
ಮೋಡಗಳ ಹಿಂದೆ ಮರೆಯಾಗಿಹನೋ ಚಂದ್ರ
ಪಯಣಿಗನಿಗೆ ದಾರಿ ಕಾಣಲಿಲ್ಲ...

ಮುಂದೊಂದು ಬಾವಿ,ಪಾತಾಳ ಕೂಪ
ತಿಳಿದಿಲ್ಲ,ಆಳದ ಅರಿವೇ ಇಲ್ಲ
ಮರೆಯಾಗಿಹುದು ಸೊಪ್ಪು ಸದೆಗಳ ಹಿಂದೆ
ದಾರಿಹೋಕನ ನಡಿಗೆ ನಿಲ್ಲಲಿಲ್ಲ...

ಬಿದ್ದರೂ, ಕೂಗಿದರೂ ಕೇಳದು ಶಬ್ದ
ನಿಲ್ಲಲಿಲ್ಲ,ಊಳಿಡುವ ನರಿ ಕೂಗಲಿಲ್ಲ
ಎದ್ದರೂ ಬಿದ್ದರೂ ಕಳೆದುಕೊಳ್ಳುವುದು ಏನು..?
ಪಯಣಿಗನೆಂದೂ ಹೆದರಿ ಕೂರಲಿಲ್ಲ..

ಸತ್ಯ ಮಿಥ್ಯೆಗಳ ನಡುವೆ ಹೊಡೆದಾಟ
ಯಾವುದು ನಿತ್ಯವೋ..? ತಿಳಿದವರು ಇಲ್ಲ..
ಕೊನೆವರೆಗೂ ನಡೆವುದು ನಿಲ್ಲಲಾರದ ಓಟ
ದಾರಿಹೋಕನ ಪಯಣ ಅನಂತವಲ್ಲ..!!!

ಅಜ್ಞಾತಮಾನವ

ಬುಧವಾರ, ಜುಲೈ 17, 2013

ಪ್ರೀತಿಯ ಸ್ಪರ್ಶ..


ಪ್ರೀತಿಯ ಸ್ಪರ್ಶ

ಎದೆಯೊಳಗೆ ಇಳಿದ ಬೇರು
ನರನರದೊಳಗೆ ಬೆಳೆದು ಹರಿದು
ಮನದ ಮೂಲೆಯ ತಿರುವಿನಲಿ
ತಿರುಗಿ,ಭಾವಗಳ ಆವರಿಸಿದಾಗ
ಅರಿವಾದದ್ದು ಆ ಪ್ರೀತಿಯ ಸ್ಪರ್ಶ..!!

ಕತ್ತಲೆಯೊಳಗೆ ಬೆಳಕಿನ ಕಿರಣ
ಮನದೊಳಗೊಂದು ಪುಟ್ಟ ಕನಸು
ಜನಿಸಿ,ನಿದ್ರೆಯೊಳು ಕನವರಿಸಿ
ಬೆಚ್ಚಿ ತಟ್ಟನೆ ಎಬ್ಬಿಸಿದಾಗ
ತಿಳಿದಿದ್ದು ಆ ಪ್ರೀತಿಯ ಸ್ಪರ್ಶ..!!


ಅನಂತ ದಿಗಂತದಾಚೆಗಿನ ಸೌಂದರ್ಯ
ತಂಗಾಳಿಯ ಸುಮಧುರ ಸೌಗಂಧ
ಭಾವಗಳ ಬಾನಿನ ತಾಕಲಾಟ
ಅರಿವಾದಂತೆನಿಸಿ ಮನಸು
ಮಂದಸ್ಮಿತದ ಸೆರಗು ಹೊದ್ದಾಗ
ಕಾಣಿಸಿದ್ದು ಆ ಪ್ರೀತಿಯ ಸ್ಪರ್ಶ..!!

ಅಜ್ಞಾತಮಾನವ

ಸೋಮವಾರ, ಜುಲೈ 8, 2013

ಕಳೆದು ಹೋದವಳು..

ನಿರಾಕಾರ ಮನದ ಜಗದಲಿ
ಜಾಜಿ ಮಲ್ಲಿಗೆಯ ಪರಿಮಳ
ಕನಸೊ ನನಸೊ ತಿಳಿಯದೆ ಕಂಗಾಲಾಗಿ
ಕಂಡದ್ದು ನಿನ್ನ ನಿರ್ಮಲ ಚೆಹರೆ..

ಪ್ರೀತಿಯ ಸ್ಪರ್ಶದ ಅರಿವಿನೊಡನೆ
ನಿನ್ನ ಮೌನದ ಅರ್ಥ ಹುಡುಕಿದ್ದು
ನಿನ್ನೆದೆಯ ಭಾವನೆಯ ತಿಳಿಯಲು
ಪಡಿಪಾಟಲು ಪಟ್ಟದ್ದು..!!!

ನೀ ಚೆಲುವೆ,ಸಂಶಯಕ್ಕಾಸ್ಪದವಿಲ್ಲ
ಆದರೆ ಆ ನಿನ್ನ ಮೌನ ಅರ್ಥವಾಗದ್ದು..!!
ನಿನ್ನೊಳಗೆ ನೀ ಕರಗಿ ಹೋಗುತ್ತಿದ್ದಾಗಲೆ
ನಾ ನಿನ್ನ ಬಯಸಿದ್ದು,ಪ್ರೀತಿಸಿದ್ದು!!

ನಿನ್ನ ಜೊತೆ ಜೊತೆಗೆ ಹೆಜ್ಜೆ ಹಾಕುತ್ತಲೇ
ಕನಸ ಮಜಲುಗಳ ಕಟ್ಟಿದ್ದು..!!
ನಿನ್ನ ಗೆಜ್ಜೆಗಳ ಸದ್ದಿನೊಳಗೆ ಕಾಣದ
ಭವಿಷ್ಯದ ಹೆಜ್ಜೆ ಗುರುತನು ಅರಸಿದ್ದು..!!

ನೆನಪಾಗುತ್ತಿದೆ ಗೆಳತಿ,ಪ್ರತಿಕ್ಷಣದಲೂ
ಹೊತ್ತಾರೆಯಿಂದ ಮುಸ್ಸಂಜೆಯವರೆಗೂ..!!
ನೀ ಸಾಗಿದರೇನು ಬಲು ದೂರದವರೆಗೂ
ನನ್ನೆದೆಯೊಳಗಿಂದ ನೀ ಓಡ ಬಲ್ಲೆಯೇನು.?!

ಕೇಳಿಸುತಿದೆ ಗೆಳತಿ, ಕಿವಿಗಳಂಗಣದಲ್ಲಿ
ಮಾತುಗಳು, ನಿನ್ನ ಮೌನದೊಳಗೂ..!!
ಅರಿಯಲಾಗದ ಯಾವುದೋ ಅದೃಶ್ಯ ಬಂಧ
ಬಿಗಿದಿಟ್ಟಿಹುದೊ ನಿನ್ನ ನನ್ನೊಳಗೆ..!!

ನಿನ್ನ ನಾ ಪಡೆದೆ ಎಂದುಕೊಂಡಾಗಲೇ
ಕಾಲ ಚಕ್ರದಲಿ ನೀ ಕರಗಿ ಹೋಗಿದ್ದೆ..!!
ಕೊನೆಗೂ ತಿಳಿಯದ ಮೌನದ ಗುಹೆಯೊಳಗೆ
ಹುದುಗಿ ಕನಸಾಗಿಯೆ ಉಳಿದೆಯೇಕೆ..??!!

ದುಃಖವಿದ್ದರೂ, ಮರೆಯಲಾರೆ ಆ ಪ್ರೀತಿ
ನೀ ನೀಡಿದ್ದು ಬದುಕಿಗೆ, ನಗುವಿನ ಕಾಣಿಕೆ..!!
ಎಲ್ಲಿ ಸಾಗಿದರೂ ನೀ ದೂರ ಅನಂತದವರೆಗೂ
ಗೆಳತಿ, ಹೂವ ಹಾಸಿಗೆಯ ಬದುಕು ನಿನ್ನದಿರಲಿ..!!


ಭಾನುವಾರ, ಜುಲೈ 7, 2013

ನೂರೆಂಟು ಸಾಲು...

    ನೂರೆಂಟು ಸಾಲು

ಅರಿಯದ ಸಾಗರದ ಆಳ
ವಿಶಾಲ ಬಾನಿನ ವೈಚಿತ್ರ
ಮಿನುಗುತಿಹ ಸಹಸ್ರಾರು ತಾರೆ
ಹೊಳೆಯುತಿಹ ದೀಪದ ಭ್ರಾಂತಿ

ಭೂತ ಭವಿಷ್ಯತ್ತಿನ ಸುಂಟರಗಾಳಿ
ನಭೋ ಮಂಡಲದಿ ವರ್ತಮಾನ
ಸುತ್ತ ಮುಸುಕಿದ ಮಂಜಿನ ತೆರೆ
ಬೇರಾಗಿಹ ಬಾಂದಳ- ಧರಿತ್ರಿ..

ಕೈಹಿಡಿದು ನಡೆಸಿದ ಪ್ರೀತಿ
ಮಸಣದಲಿ ಗೋರಿಯ ಕೆಳಗೆ
ಛಿದ್ರ ವಿಚ್ಛಿದ್ರ ಬದುಕಿನ ಗಾಲಿ
ನೊಗ ಹೊತ್ತ ಎತ್ತು ಹೊಡೆದು ಜೋಲಿ

ನೀರಿನಲಿ ಮೀನಿನ ಹೆಜ್ಜೆಯ ಜಾಡು
ಅರಿಯದ ತಳಮಳ,ತಾಕಲಾಟ
ನಿಶೆಯೊಳಗಿನ ಕನಸಿನ ಕನ್ನಡಿ
ಸ್ಥಬ್ದ, ಅಲ್ಲ, ಚೂರು ಚೂರು..!!

ಅರ್ಥವಿಲ್ಲದ ನೂರೆಂಟು ಸಾಲು
ನಡುನಡುವೆ ಮೌನದ ಮಾತು..
ಎದೆ ಬಗೆವ ಭಾವದ ಮಾಲೆ
ಸುಟ್ಟು ಕರಟಿಸುತಿಹ ನೆನಪ ದಿವ್ಯಜ್ವಾಲೆ..!!

ಮುಚ್ಚಿದ ರೆಪ್ಪೆಗಳ ಕೆಳಗೆ
ಅತ್ತಿತ್ತ ಸರಿದಾಡುವ ಜೋಡಿ ಕಣ್ಣು
ಕಾಣಿಸದ ಕತ್ತಲ ಲೋಕದಲೂ
ಬದುಕ ಹುಡುಕುವ ವ್ಯರ್ಥ ಹಮ್ಮು..!!!

ಅರಿಯದ ಸಹಸ್ರಾರು ಉಕ್ತಿಗಳು
ತಿಳಿಯದ ಮನಸಿನ ವೇದನೆ
ಆರ್ದ್ರ ಆರ್ತನಾದದ ಬದುಕು
ಕಳೆದು ಹೋದದ್ದು ಒಂದು ಅಪೂರ್ವ ಮುತ್ತು...!!!

            ಅಜ್ಞಾತಮಾನವ

ಬುಧವಾರ, ಜುಲೈ 3, 2013

ಅರಿವು....

             ಅರಿವು

ಮುಖವದು ಮನದ ಕನ್ನಡಿಯಂತೆ
ಹೇಳಿದವರಾರೋ ,ಅಜ್ಞಾನಿಗಳು ಎಂದೋ..
ನೂರೆಂಟು ಮುಖವಾಡ ಹೊತ್ತವರಿಗೆ
ಯಾವ ಮುಖವಿದೆಯೊ ಮನಸು ಪ್ರತಿಫಲಿಸುವಂತೆ ..?!!
ಎದೆಯೊಳಗೆ ಉರಿ ಉರಿವ ಬೆಂಕಿಯ ಜ್ವಾಲೆ
ತುಟಿಯಲಿ ಮಾಸದ ತುಂಟನಗು
ಕಣ್ಣಲಿ ಇಣುಕಿ ನೋಡುವ ವೇದನೆಯ ತಂತು
ಮೀಟಿದವರಿಗೆ ಅರಿವಾಗಬಹುದೇನೋ ಮನಸ್ಸು..!!!

ನನ್ನ ಮನಸದು ಸೂರ್ಯಕಿರಣಗಳಂತೆ,ಶುಭ್ರ.!!
ಅಂದವರೆಷ್ಟೋ ಮುಗುಳುನಗು ನಗುತ ..!!
ಸೂರ್ಯನಿಗೂ ಮುಸುಕುವುದಿಲ್ಲವೇ ಮೋಡ...?
ಇವರೇನು ಅತೀತರೆ ಕಲ್ಮಶಗಳಿಗೆಲ್ಲವೂ...!!!
ಮನಸದು ಶಾಂತ,ಚಂದಿರನ ಬೆಳದಿಂಗಳಂತೆ
ನಿಷ್ಕಲ್ಮಶ,ಹೊಳೆವ ಬಿಳಿಯ ಬಣ್ಣದಂತೆ..
ಚಂದಿರನ ಮೊಗದಲ್ಲು ಕಲೆಯ ಚಿತ್ತಾರವಿದೆ.,
ಬಿಳಿಯ ಬಣ್ಣದಲು ಇಲ್ಲವೇನು ಬೆರಕೆ...!!!

ಜಗವೇ ಒಂದು ಮುಖವಾಡಗಳ ಊರು
ಅರಿತವರು ಯಾರಿಲ್ಲ..,ಪ್ರತಿಫಲನ ಎಂತು..??!!
ಹೊರಗೆ ಕಾಣುವುದೆಲ್ಲ ನಿಜವಲ್ಲ,ಬಿಳಿಯಾದುದೆಲ್ಲ ಹಾಲಲ್ಲ..
ಸತ್ಯ ಅರಿತವಗೆ ಬಾಳೆಂಬುದೇ ಬರಿಯ ಕನಸು...!!!

ಬುಧವಾರ, ಜೂನ್ 26, 2013

ಕಾಯುತ್ತಿದ್ದಾಳೆ


ಹೊಂಗನಸು


ಭಾವ ಸಂಚಾರ


ಬದುಕು