ಬುಧವಾರ, ಜುಲೈ 3, 2013

ಅರಿವು....

             ಅರಿವು

ಮುಖವದು ಮನದ ಕನ್ನಡಿಯಂತೆ
ಹೇಳಿದವರಾರೋ ,ಅಜ್ಞಾನಿಗಳು ಎಂದೋ..
ನೂರೆಂಟು ಮುಖವಾಡ ಹೊತ್ತವರಿಗೆ
ಯಾವ ಮುಖವಿದೆಯೊ ಮನಸು ಪ್ರತಿಫಲಿಸುವಂತೆ ..?!!
ಎದೆಯೊಳಗೆ ಉರಿ ಉರಿವ ಬೆಂಕಿಯ ಜ್ವಾಲೆ
ತುಟಿಯಲಿ ಮಾಸದ ತುಂಟನಗು
ಕಣ್ಣಲಿ ಇಣುಕಿ ನೋಡುವ ವೇದನೆಯ ತಂತು
ಮೀಟಿದವರಿಗೆ ಅರಿವಾಗಬಹುದೇನೋ ಮನಸ್ಸು..!!!

ನನ್ನ ಮನಸದು ಸೂರ್ಯಕಿರಣಗಳಂತೆ,ಶುಭ್ರ.!!
ಅಂದವರೆಷ್ಟೋ ಮುಗುಳುನಗು ನಗುತ ..!!
ಸೂರ್ಯನಿಗೂ ಮುಸುಕುವುದಿಲ್ಲವೇ ಮೋಡ...?
ಇವರೇನು ಅತೀತರೆ ಕಲ್ಮಶಗಳಿಗೆಲ್ಲವೂ...!!!
ಮನಸದು ಶಾಂತ,ಚಂದಿರನ ಬೆಳದಿಂಗಳಂತೆ
ನಿಷ್ಕಲ್ಮಶ,ಹೊಳೆವ ಬಿಳಿಯ ಬಣ್ಣದಂತೆ..
ಚಂದಿರನ ಮೊಗದಲ್ಲು ಕಲೆಯ ಚಿತ್ತಾರವಿದೆ.,
ಬಿಳಿಯ ಬಣ್ಣದಲು ಇಲ್ಲವೇನು ಬೆರಕೆ...!!!

ಜಗವೇ ಒಂದು ಮುಖವಾಡಗಳ ಊರು
ಅರಿತವರು ಯಾರಿಲ್ಲ..,ಪ್ರತಿಫಲನ ಎಂತು..??!!
ಹೊರಗೆ ಕಾಣುವುದೆಲ್ಲ ನಿಜವಲ್ಲ,ಬಿಳಿಯಾದುದೆಲ್ಲ ಹಾಲಲ್ಲ..
ಸತ್ಯ ಅರಿತವಗೆ ಬಾಳೆಂಬುದೇ ಬರಿಯ ಕನಸು...!!!

ಕಾಮೆಂಟ್‌ಗಳಿಲ್ಲ: