ಶನಿವಾರ, ಜುಲೈ 27, 2013

ಕನಸು ಗೀಚಿದ ಹುಡುಗಿ..

ಮನಸ ರಾಜ್ಯದಲಿ ಕನಸು ಮಾರುವ ಹುಡುಗಿ
ಬಿಳಿಹಾಳೆಯ ಹೃದಯದಲಿ ಕವನ ಗೀಚಿದಳು..

ಹೊಳೆವ ಕಣ್ಣದು, ನಕ್ಷತ್ರ ಬಿಂಬ
ಚಂಚಲ ರೆಪ್ಪೆ, ಹೊಡೆವಾಗ ಪಟಪಟನೆ
ಎನ್ನ ಹೃದಯವದು ಹೊಸರಾಗ ಹಾಡಿತ್ತು
ಎದೆಯೊಳಗೆ ಸವಿ, ಕನಸು ಮೂಡಿತ್ತು

ಕೆನ್ನೆಯಂಚಲಿ ನವಿರು ಕೆಂಪಿನ ಅಚ್ಚು,
ಅಧರದಂಚಲಿ ನಸು ಮಂದಹಾಸದ ನಲಿವು
ಮನಸಿನಾಳದಲಿ ಸುಳಿದು ಇಳಿದಿತ್ತು
ಕಣ್ಣಿನಲಿ ಅವಳ ಪ್ರತಿಬಿಂಬ ಮೂಡಿತ್ತು

ತಂಗಾಳಿಯಲಿ ಅವಳ ಮುಂಗುರುಳ ಲಾಸ್ಯ
ನನ್ನೊಳಗೆ ಪ್ರೀತಿಯ ಕನಸ ವಿನ್ಯಾಸ
ಬದುಕಿನಂಗಳದಿ ಹೊಸತು ದೀಪ ಬೆಳಗಿತ್ತು
ಅರಿವಿನಂಚಿನ ಗಡಿಯ ಮನಸು ದಾಟಿತ್ತು...


ಅವಳು,
ಮನಸ ರಾಜ್ಯದಲಿ ಕನಸು ಮಾರಿದ ಹುಡುಗಿ
ಬಿಳಿಹಾಳೆಯ ಹೃದಯದಲಿ ಕವನ ಗೀಚಿದಳು.. 

ಕಾಮೆಂಟ್‌ಗಳಿಲ್ಲ: